ಸಂಗೀತ ಕಟ್ಟಿ ಕುಲಕರ್ಣಿ: ಒಂದು ಅದ್ಭುತ ಮುತ್ತಿನ ಕಥೆ

ರೆಂಬಿ ಕೊಂಬಿಯ ಮ್ಯಾಲ ಗೂಡು ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ, ಗೂಡಿನ್ಯಾಗ ಮಲಗ್ಯಾವ ಮರಿ ಹಕ್ಕಿ … (ಧಾರವಾಹಿ: ಮೂಡಲಮನೆ)

ಕಂಬದ ಮ್ಯಾಲಿನ ಬೊಂಬೆಯೇ ನಂಬಲೇನ ನಿನ್ನ ನಗೆಯನ್ನ ... (ಚಿತ್ರ: ನಾಗಮಂಡಲ)

ಈ ಇಂಪಾದ ಹಾಡುಗಳನ್ನು ಸ್ವತಃ ಸಂಗೀತ ಕಟ್ಟಿ ಕುಲಕರ್ಣಿಯವರ ಬಾಯಲ್ಲಿ ಕೇಳುವ ಪುಣ್ಯ ನಮಗೆ ಒಲಿದು ಬಂದಿತ್ತು. ಇದಷ್ಟೇ ಅಲ್ಲದೆ ಅವರ ಸಂಗೀತ ಲೋಕದ ಅಭೂತಪೂರ್ವ ಪಯಣ ಮತ್ತು ಕೆಲವು ಹಳೇ ಸವಿನೆನಪುಗಳನ್ನು ನಮ್ಮ ಮುಂದೆ ಬಿಚ್ಚಿಟ್ಟರು ಸಂಗೀತ ಕಟ್ಟಿ. ಹೊಸ ಪ್ರಯೋಗಗಳಿಗೆ ಹೆಸರಾದ ಇವರ ಸುಂದರ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.Sangeeta Katti image

ಅವರ ಪಯಣ ಪ್ರಾರಂಭವಾಗಿದ್ದು ಧಾರವಾಡದಲ್ಲಿ, ಬಾಲ್ಯದಿಂದಲೇ ಸಂಗೀತದಲ್ಲಿ ಮುಳುಗಲಾರಂಭಿಸಿದರು. ಆನಂತರ ಈ ಪಯಣ ಶಾಸ್ತ್ರೀಯ ಸಂಗೀತದ ಬಾಗಿಲು ತಟ್ಟಿತು. ಅವರ ಗುರುಗಳ ಆಶೀರ್ವಾದದಿಂದ ಮತ್ತು ಜನರ ಅಪಾರ ಪ್ರೀತಿ ಹಾಗು ಅಭಿಮಾನದಿಂದ ಈ ಪಯಣ ಇವತ್ತಿಗೂ ನಿಂತಿಲ್ಲ, ನಿಲ್ಲುವ ಸಾಧ್ಯತೆಗಳೂ ಇಲ್ಲ. ೧೯೯೧ ರಿಂದ ೧೯೯೩, ಇವರಿಗೆ ತುಂಬಾ ಹೆಸರು ತಂದುಕೊಟ್ಟವು, ಬಹು-ಭಾಷಾ ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಯಶಸ್ಸು ಕಂಡರು. ಬಹಳಷ್ಟು ಭಾವಗೀತೆಗಳನ್ನೂ ಹಾಡಿದ್ದಾರೆ.

ನಂತರದ ದಿನಗಳಲ್ಲಿ ಭಾವಗೀತೆಗಳನ್ನು ಹಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಮತ್ತು ಸಿ. ಅಶ್ವಥ್ ಅವರ ಜೋಡಿ ಬಹಳ ಮಧುರವಾದ ಹಾಡುಗಳನ್ನು ಕನ್ನಡ ಸಂಗೀತ ಲೋಕಕ್ಕೆ ನೀಡಿದ್ದಾರೆ. ಅಮೇರಿಕಾ ಅಮೇರಿಕಾ (ಯಾವ ಮೋಹನ ಮುರಳಿ ಕರೆಯಿತು, ನೂರು ಜನ್ಮಕು ನೂರಾರು ಜನ್ಮಕು) ಮತ್ತು ನಾಗಮಂಡಲ (ಕಂಬದ ಮ್ಯಾಲಿನ ಬೊಂಬೆಯೇ, ಈ ಹಸಿರು ಸಿರಿಯಲಿ) ಚಿತ್ರದ ಹಾಡುಗಳು ಬಹಳ ಯಶಸ್ಸು ತಂದುಕೊಟ್ಟಿತು. ಒಂದೇ ವರ್ಷದಲ್ಲಿ ಇವರು ೨೫ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಹಾಡಿದ್ದರು.

ಧಾರವಾಡ ಮತ್ತು ಬಾಲ್ಯದ ಬಗ್ಗೆ ಕೇಳಿದಾಗ, ವಿದ್ಯಾಭ್ಯಾಸದಲ್ಲಿ ಬಹಳ ಚೆನ್ನಾಗಿಯೇ ಓದುತಿದ್ದ ಇವರು, ಇದರ ಜೊತೆಗೆ ಸಂಗೀತವನ್ನು ಸಹ ಕಲಿಯಲಾರಂಭಿಸಿದರು. ಪ್ರತೀ ದಿನ ಸಂಗೀತಾಭ್ಯಾಸ ಮಾಡುತ್ತಿದ್ದ ಇವರು, ಸಂಗೀತದ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಎಂ. ಎಸ್ಸಿಯ ಕೊನೆ ವರ್ಷದ ಪರೀಕ್ಷೆ ಬಿಟ್ಟು ಸಂಗೀತದ ಹಾದಿ ಹಿಡಿದರು, ಇದು ಇವರ ಜೀವನದ ಒಂದು ಪ್ರಮುಖ ಹಂತವಾಗಿತ್ತು. ಸಂಗೀತಕ್ಕೋಸ್ಕರ ತಮ್ಮ ಅಷ್ಟೂ ವರ್ಷದ ವಿಧ್ಯಾಭ್ಯಾಸವನ್ನು ತ್ಯಾಗ ಮಾಡಿದರು. ಧಾರವಾಡ ಮತ್ತು ಅದರ ಸುತ್ತ ಮುತ್ತ ಯಾವುದೇ ಸಂಗೀತ ಕಾರ್ಯಕ್ರಮವಾದರೂ ಸಂಗೀತ ಕಟ್ಟಿಯವರ ತಂದೆ ಎಲ್ಲಾ ಕಾರ್ಯಕ್ರಮಕ್ಕೂ ಕರೆದುಕೊಂಡು ಹೊಗುತಿದ್ದುದನ್ನು ನೆನಪಿಸಿಕೊಂಡರು.

೨೦೧೪ ರಲ್ಲಿ ನಡೆದ ಹಂಪಿ ಉತ್ಸವದಲ್ಲಿ ಸಂಗೀತ ನಿನಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜನರ ಮುಂದೆ ಪ್ರಸ್ತುತ ಪಡಿಸಿದರು. ಈ ಕಾರ್ಯಕ್ರಮ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಸಂಗೀತದ ಜುಗಲ್ ಬಂದಿಯಾಗಿತ್ತು. ಹಾಗೆಯೇ ಅವರ ಇನ್ನೊಂದು ಕಾರ್ಯಕ್ರಮ ಪರಂಪರಾ ಸಹಾ ಯಶಸ್ವಿಯಾಗಿದ್ದು, ಈ ಕಾರ್ಯಕ್ರಮದಲ್ಲಿ ಸಂಗೀತ ಭಾರತದಲ್ಲಿ ಬೆಳೆದು ಬಂದ ಪ್ರತೀ ಹಂತವನ್ನು ಬಹಳ ವಿಸ್ತಾರವಾಗಿ ಹೇಳಲಾಗಿತ್ತು. ಏಳು ಭಾಷೆಗಳನ್ನು ಬಹಳ ಸ್ವಚ್ಚಂದವಾಗಿ ಮಾತನಾಡಿ ಹಾಡು ಹೇಳುವ ಇವರು, ಅಮೇರಿಕಾ, ಆಸ್ಟ್ರೇಲಿಯಾ, ಇನ್ನಷ್ಟು ದೇಶಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.  ಇವರು ಹೇಳುವ ಪ್ರಕಾರ, ಸಂಗೀತಕ್ಕೆ ಯಾವ ಭಾಷೆಯಾ ಅಗತ್ಯವಿಲ್ಲ, ಭಾವ ಮತ್ತು ಭಾವನೆಗಳು ಎಲ್ಲವನ್ನೂ ವ್ಯಕ್ತಪಡಿಸುತ್ತವೆ.

Sangeeta Katti
ಸಂಗೀತ್ ಸಾಮ್ರಾಟ್ ನೌಶಾದ್ ಸಹಾಬ್ ಜೊತೆ ಸಂಗೀತ ಕಟ್ಟಿ

ಇಂದಿನ ಪೀಳಿಗೆ ಬಗ್ಗೆ ಕೇಳಿದಾಗ, ಸಂಗೀತ ಒಂದು ತಪಸ್ಸು ಅದು ಕೇವಲ ಎರಡು ದಿನಗಳಲ್ಲಿ ಬರುವಂತಹದಲ್ಲ. ಯಾವಾಗಲೂ ಕಲಿಯುವ ಹಂಬಲ ಮತ್ತು ಗುರಿ ಸಾಧಿಸುವ ಛಲವಿದ್ದರೆ ಸಂಗೀತ ಶಾಶ್ವತವಾಗಿ ಉಳಿಯುತ್ತದೆ. ಈಗಿನವರಿಗೆ ಬಹಳಷ್ಟು ಅವಕಾಶಗಳಿವೆ ಮತ್ತು ಅವರ ಪ್ರತಿಭೆಯನ್ನು ತೋರಿಸಲು ಸಾಕಷ್ಟು ವೇದಿಕೆಗಳಿವೆ. ಇವೆಲ್ಲವುದನ್ನು ಸದುಪಯೋಗ ಪಡಿಸಿಕೊಂಡರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎನ್ನುವುದು ಅವರ ವಾದ. ಭಾರತದ ಮತ್ತು ಕರ್ನಾಟಕದ ಸಂಗೀತ ಸಂಸ್ಕೃತಿ ಬಹಳ ವಿಸ್ತಾರವಾಗಿದ್ದು, ಯುವ ಪ್ರತಿಭೆಗಳು ಇದನ್ನು ಕಲಿಯುವ ಕೆಲಸ ಮಾಡಬೇಕಾಗಿದೆ ಎಂದರು. ಪ್ರತೀ ಹಾಡು ಒಂದು ಶಾಲೆ ಇದ್ದ ಹಾಗೆ ಮತ್ತು ಪ್ರತೀ ಸಂಗೀತ ಸಂಯೋಜನೆ ಒಂದು ವಿಶ್ವವಿದ್ಯಾಲಯ ಇದ್ದ ಹಾಗೆ, ಕಲಿಯುವದಕ್ಕೆ ತುಂಬಾ ಅವಕಾಶವಿರುತ್ತದೆ.

ನಮ್ಮ ಕೆಲವು ಪ್ರಶ್ನೆಗಳಿಗೆ ಸಂಗೀತ ಕಟ್ಟಿಯವರ ಸಿಹಿಯಾದ ಉತ್ತರ:

೧. ನಿಮಗೆ ತುಂಬಾ ಖುಷಿ ಕೊಟ್ಟ ನೀವು ಹಾಡಿರುವ ಹಾಡು ?

ಸಂಗೀತ ಕಟ್ಟಿ: ಅಯ್ಯಾ ನೀನು ತನು ಕರಗದು ( ಏನ್. ಎಸ್. ಪ್ರಸಾದ್ ಸಂಗೀತ). ೫ ವಚನಗಳ ಭಂಡಾರ, ಜೆ ಎಸ್ ಎಸ್ ಯೋಜನೆಯ ಗೀತೆ.

೨. ನಿಮ್ಮ ಅಂತರ್ಜಾಲ ತಾಣದಲ್ಲಿ “ಬಿಲೀವರ್” ಅಂತ ಇದೆ, ಇದರ ಹಿಂದಿನ ಅರ್ಥ ?

ಸಂಗೀತ ಕಟ್ಟಿ: ಸತ್ಯದ “ಬಿಲೀವರ್” ನಾನು. ಮರೀಚೀಕೆಯನ್ನು ನಂಬಲ್ಲ, ಸತ್ಯವನ್ನ ನಂಬಿ ಬದುಕುತ್ತೀನಿ.

೩. ಯುವ ಜನೆತೆಗೆ ನಿಮ್ಮ ಸಂದೇಶ, ಸಂಗೀತದ ಮೂಲಕ ?

ಸಂಗೀತ ಕಟ್ಟಿ: ಮನ್ ಮೈ ಹೈ ವಿಶ್ವಾಸ್, ಪೂರ ಹೈ ವಿಶ್ವಾಸ್

ಸದಾ-ಕಾಲ ಒಳ್ಳೆಯದನ್ನು ಯೋಚಿಸುವ ಮತ್ತು ಸಕಾರಾತ್ಮಕ ಕೆಲಸಗಳನ್ನು ಮಾಡುವ ಇವರು, ಇನ್ನೇನು ಸಂಗೀತ ಲೋಕದಲ್ಲಿ ೪೦ ವಸಂತಗಳನ್ನ ಪೂರೈಸಲಿದ್ದಾರೆ. ಇವರು ತಮ್ಮ ಎಲ್ಲಾ ಯಶಸ್ಸನ್ನು ತಮ್ಮ ಅಭಿಮಾನಿಗಳಿಗೆ ಅರ್ಪಿಸುತ್ತಾರೆ. ಅಭಿಮಾನಿಗಳನ್ನು ಬಹಳ ಪ್ರೀತಿಯಿಂದ ನೋಡುವ ಇವರು, ತಮ್ಮನ್ನು ಜನಮನಗಳ ಸ್ವತ್ತು ಎಂದು ಹೇಳಿಕೊಳ್ಳುತ್ತಾರೆ. ಇವರು ಹೇಳುವ ಪ್ರಕಾರ ಸಂಗೀತ ಎನ್ನುವುದು ಏಳು ನಾದಗಳ ಪುಟ್ಟ ಜಗತ್ತು, ಆದರೆ ಇದರ ವಿಸ್ತಾರ ಅನಂತ. ಶ್ರದ್ಧೆ, ಪರಿಶ್ರಮ, ಗುರಿ, ಸಾಧಿಸಬೇಕೆನ್ನುವ ಛಲ ಮತ್ತು ಕಲಿಯುವ ಹಂಬಲ ಇವರ ಸಾಧನೆಯ ಹಾದಿಯ ಪ್ರಮುಖ ಮೆಟ್ಟಿಲುಗಳಾದವು.

ಇವರ ಇಂಪಾದ ಹಾಡುಗಳು ಸದಾ ನಮ್ಮನ್ನು ತಣಿಸುತ್ತಿರಲಿ ಎಂದು ಆಶಿಸುತ್ತೇವೆ. ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು, ಇದೀಗ ಕರ್ನಾಟಕ ಸರ್ಕಾರ ನೀಡುವ ವಚನಶ್ರೀ ಪ್ರಶಸ್ತಿ ಪಡೆದಿದ್ದಾರೆ. ಇವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಟಿತ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಸಂಗೀತ ಕಟ್ಟಿ ಕುಲಕರ್ಣಿಯವರಿಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

ಹೃದಯಪೂರ್ವಕ ಧನ್ಯವಾದಗಳು: ಅತಿಥಿ ಬರಹಗಾರ ಮನು ಡಿ ಕೆ ಹಾಗು ತಿದ್ದಿತೀಡಿ ಸಲಹೆಗಳನ್ನು ನೀಡಿದ ತ್ರಿಲೋಚನ ರಾಜಪ್ಪ

Leave a Reply

Your email address will not be published. Required fields are marked *